ಕರ್ನಾಟಕ ಕೇಸರಿ
	
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. 1928ರ ಜುಲೈ ತಿಂಗಳಿನಲ್ಲಿ ಪ್ರಾರಂಭವಾಗಿ ಎರಡು ವರ್ಷಕಾಲ ನಡೆಯಿತು. ಸಂಪಾದಕರು : ಮಂಜೇಶ್ವರ ಅನಂತರಾವ್, ಸಾಹಿತ್ಯ ವಿಜ್ಞಾನ ಕಲಾ ಇತ್ಯಾದಿ ಸಾರ್ವತ್ರಿಕ ಹಿತದ ಮತ್ತು ರಂಜನೀಯ ವಿಷಯಗಳನ್ನೊಳಗೊಂಡ ತಿಳಿಗನ್ನಡ ಸಚಿತ್ರ ಮಾಸಪತ್ರಿಕೆ ಎಂಬುದು ಆರಂಭದಲ್ಲಿ ಸಂಪಾದಕರು ಈ ಪತ್ರಿಕೆಯ ಬಗ್ಗೆ ನೀಡಿದ್ದ ಒಕ್ಕಣೆ. ಇದರಲ್ಲಿ ಕಥೆ, ಕವನ, ಪ್ರಬಂಧ, ನಾಟಕ, ಐತಿಹಾಸಿಕ ಲೇಖನ, ಸಂಶೋಧನಪ್ರಬಂಧ ಮುಂತಾದ ವಿವಿಧ ಸಾಹಿತ್ಯ ಪ್ರಕಾರಗಳ ಲೇಖನಗಳಿರುತ್ತಿದ್ದುವು. 24 ಪುಟಗಳ ಈ ಪತ್ರಿಕೆಯ ಪುಟಸಂಖ್ಯೆಯನ್ನು ಒಂದು ಸಂಚಿಕೆಯಿಂದ ಇನ್ನೊಂದಕ್ಕೆ ಕ್ರಮಾನುಗತವಾಗಿ ಮುಂದುವರಿಸಿಕೊಂಡು ಬರಲಾಗುತ್ತಿತ್ತು. ಬಿಡಿಸಂಚಿಕೆಯ ಬೆಲೆ ನಾಲ್ಕಾಣೆ; ವಾರ್ಷಿಕ ಚಂದಾ ಎರಡೂವರೆ ರೂಪಾಯಿ. ಮೊದಲ ಪುಟದಲ್ಲಿ ಸಾಮಾನ್ಯವಾಗಿ ಕವಿತೆಯೊಂದು ಇರುತ್ತಿತ್ತು. ಅದರ ಬದಿಯ ಪುಟ ಪ್ರಾಚೀನ ದೇವಾಲಯಗಳ ಚಿತ್ರಗಳಿಗೆ ಮೀಸಲು.
	
ಎಂ.ಗೋವಿಂದ ಪೈ ಅವರ "ಲಕ್ಷ್ಮೀಶನ ಕಾಲ ವಿಚಾರ", ಶಿವರಾಮ ಕಾರಂತರ "ವಿಜಯನಗರಕ್ಕೆ ಸಂಬಂಧಿಸಿದ ಲೇಖನಮಾಲೆ", ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ "ನಿಜಗಲ್ಲಿನ ರಾಣಿ" ಮೊದಲಾದ ಹಲವಾರು ಸಂಶೋಧಕ ಚಾರಿತ್ರಿಕ ಲೇಖನಗಳು ಈ ಪತ್ರಿಕೆಯಲ್ಲಿ ಬೆಳಕು ಕಂಡುವು. ಐರೋಡಿ ಶಿವರಾಮಯ್ಯ, ಹೊಸಕೆರೆ ಚಿದಂಬರಯ್ಯ, ಉಗ್ರಾಣ ಮಂಗೇಶರಾವ್, ಮಾಂಡೇಶ್ವರ ಗಣಪತಿರಾವ್, ಕಡೆಂಗೋಡ್ಲು ಶಂಕರ ಭಟ್ಟ, ಮಚ್ಚಿಮನೆ ಶಂಕರನಾರಾಯಣರಾವ್, ಬೆಳ್ಳೆ ರಾಮಚಂದ್ರರಾವ್- ಇವರು ಈ ಪತ್ರಿಕೆಯ ಲೇಖಕ ಬಳಗಕ್ಕೆ ಸೇರಿದ್ದ ಇನ್ನು ಕೆಲವರು. ಪುತ್ತೂರಿನ ಹರಿಹರ ಪ್ರೆಸ್ಸಿನಲ್ಲಿ ಅಚ್ಚಾಗುತ್ತಿದ್ದ ಈ ಮಾಸಪತ್ರಿಕೆ ಎರಡು ವರ್ಷಗಳ ಕಾಲ ನಡೆಯಿತು. ಸಾಹಿತ್ಯಪ್ರಸಾರವೇ ಈ ಪತ್ರಿಕೆಯ ಮುಖ್ಯ ಧ್ಯೇಯವಾಗಿದ್ದುದರಿಂದ ಅಂಥ ಉದ್ದೇಶವಿದ್ದ ಲೇಖನಗಳಿಗೆ ಅದರಲ್ಲಿಯೂ ಪ್ರೌಢ ಶೈಲಿಯ ಲೇಖನಗಳಿಗೆ ಇದು ತುಂಬ ಪ್ರೋತ್ಸಾಹ ನೀಡುತ್ತಿತ್ತು. ಇದರ ಪ್ರಸಾರ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿದ್ದು ಆ ಭಾಗದಲ್ಲಿ ಜನಪ್ರಿಯವಾದ ಪತ್ರಿಕೆಯೆನಿಸಿತ್ತು.					
	(ಎಸ್.ವಿ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ